1 Voodoonos

Essay On Dussehra In Kannada Language

ಮುಖಪುಟ/ನಮ್ಮಹಬ್ಬಗಳು 

ಮೈಸೂರು ಒಡೆಯರ, ವಿಜಯನಗರದರಸರ ವೈಭವದ ದಸರಾ
ನಾಡಹಬ್ಬ ದಸರ ವೈಭವ ಕಾಣಲು ಕಣ್ಣು ನೂರು ಸಾಲದು...

ದಸರೆ ಕನ್ನಡಿಗರ ನಾಡ ಹಬ್ಬ. ಕರ್ನಾಟಕದಲ್ಲಿ ಸಹಸ್ರಾರು ವರ್ಷಗಳಿಂದ ಅನೂಚಾನವಾಗಿ ದಸರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದಲ್ಲಿ ದಸರೆಗೆ ಭವ್ಯ ಇತಿಹಾಸವೂ ಉಂಟು. ಹತ್ತುದಿನಗಳ ದಸರೆಯಲ್ಲಿ ಮಾರ್ನೋಮಿ ಮತ್ತು ವಿಜಯದಶಮಿಗೆ ಮಹತ್ವ.

ದೇಶದ ನಾನಾ ಭಾಗಗಳಲ್ಲಿ ನಾನಾ ಪ್ರಕಾರವಾಗಿ ದಸರೆ, ನವರಾತ್ರಿಯ ಆಚರಣೆ ಇದೆಯಾದರೂ, ಮೈಸೂರು ದಸರೆಗೆ ವಿಶೇಷ ಮಹತ್ವ. ಮೈಸೂರು ದಸರೆಗೆ ವಿಶ್ವಖ್ಯಾತಿಯೇ ಇದೆ. ಈ ಖ್ಯಾತಿಗೆ ಮೂಲ ಪ್ರೇರಣೆ ಹಂಪೆಯ ಅರಸರು.

ವಾಸ್ತವವಾಗಿ ದಸರೆ ಉತ್ಸವವಾಗಿ ಆಚರಣೆಗೆ ಬಂದಿದ್ದೇ ವಿಜಯನಗರದರಸರಿಂದ. ಹಂಪಿಯ ಅರಸರು ದಸರೆಯನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು ಎಂಬುದಕ್ಕೆ ಹಲವು ದಾಖಲೆಗಳೂ ಇವೆ. ವಿದೇಶೀ ಪ್ರವಾಸಿಗರೂ ಕೂಡ ವಿಜಯನಗರದ ವಿಜಯದಶಮಿ ಉತ್ಸವದ ವೈಭವ ಕಂಡು ಬೆಕ್ಕಸ ಬೆರಗಾಗಿ, ತಮ್ಮ ಪ್ರವಾಸ ಕಥನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಅಬ್ದುಲ್ ರಜಾಕ್, ನ್ಯೂನಿಜ್, ಪೆಯಸ್ ಮೊದಲಾದ ವಿದೇಶೀ ಪ್ರವಾಸಿಗರ ಪ್ರವಾಸ ಕಥನಗಳಲ್ಲಿ ವಿಜಯನಗರ ದಸರಾ ಉತ್ಸವದ ವಿವರಗಳಿವೆ. ವರ್ಷಋತು ಅರ್ಥಾತ್ ಮಳೆಗಾಲ ಕಳೆದ ಬಳಿಕ ಬರುವ ಶರದೃತುವಿನಲ್ಲಿ ಮಳೆಯಲ್ಲಿ ಭೂಮಿ ಒಣಗಿ ಗಟ್ಟಿಯಾಗಿರುತ್ತದೆ. ಇದು ಸೈನ್ಯ ಜಮಾವಣೆಗೆ ಉತ್ತಮ ಸಮಯವಾಗಿತ್ತು.

ಹೀಗಾಗೇ ಅರಸರು ಆರಂಭಿಸಿದ ನವರಾತ್ರಿಯ ಉತ್ಸವಕ್ಕೆ ಎಲ್ಲ ಮಾಂಡಲಿಕರೂ, ಸಾಮಂತರು ತಮ್ಮ ಸೈನ್ಯದೊಂದಿಗೆ ರಾಜಧಾನಿಗೆ ಆಗಮಿಸಿ, ವಿವಿಧ ಶಕ್ತಿ ಪ್ರದರ್ಶನ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ತಮ್ಮ ದಳದ ಶಕ್ತಿ ಸಾಮರ್ಥ್ಯವನ್ನು ಜನರೆದುರು ಪ್ರದರ್ಶಿಸಿ, ತಮ್ಮ ಸೈನ್ಯದ ಬಲ ಪರಾಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದರು. ನವರಾತ್ರಿ ಪೂಜೆಯ ಬಳಿಕ ವಿಜಯನಗರದ ಅರಸರ ದಂಡಿನೊಂದಿಗೆ ಜೈತ್ರಯಾತ್ರೆ ಹೊರಡುತ್ತಿದ್ದರು.

ಈ ಶಕ್ತಿ ಪ್ರದರ್ಶನ, ಉತ್ಸವದ ವೀಕ್ಷಣೆಗಾಗಿಯೇ ಹಂಪಿಯಲ್ಲಿ ಮಹಾನವಮಿ ದಿಬ್ಬದ ನಿರ್ಮಾಣವಾಯಿತು. ಈ ದಿಬ್ಬದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾಗುತ್ತಿದ್ದ ರಾಯರು, ನೃತ್ಯ, ಸಂಗೀತ, ಆಟಪಾಠ, ಕತ್ತಿವರಸೆ, ಮಲ್ಲಯುದ್ಧ, ಕವಾಯತು ವೀಕ್ಷಿಸುತ್ತಿದ್ದರು. ಪ್ರತಿಭಾವಂತರನ್ನು ಸತ್ಕರಿಸುತ್ತಿದ್ದರು. ಪ್ರತಿನಿತ್ಯ 36 ಸುಂದರಿಯರು ಚಿನ್ನದ ಕಳಶ ಪೂಜೆ ಮಾಡುವ ಮೂಲಕ ದಿನದ ಕಲಾಪಕ್ಕೆ ಮಂಗಳ ಹಾಡುತ್ತಿದ್ದರು.

ನವಮಿಯ ದಿನ ಈ ದಿಬ್ಬದಲ್ಲಿ ನಿಂತು ರಾಯರು, ತಮ್ಮ ಎಲ್ಲ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ವಿಜಯನಗರದರಸರ ಈ ವಿಶಿಷ್ಟ ಸಂಪ್ರದಾಯವನ್ನು ಮೈಸೂರು ಒಡೆಯರೂ ಪಾಲಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೇ ಮೈಸೂರಿನಲ್ಲಿ ದಸರಾ ಉತ್ಸವ ಆಚರಣೆಗೆ ಬಂದಿತ್ತು ಎಂಬುದಕ್ಕೆ ಸಾಕ್ಷ್ಯಗಳಿವೆ.

ದಸರೆಯ ಕಾಲದಲ್ಲಿ ಮೈಸೂರಿನಲ್ಲಿ ಕೂಡ ಒಡೆಯರು ಮಯೂರ ಸಿಂಹಾಸನಾರೂಢರಾಗಿ ಸಂಗೀತ, ನೃತ್ಯ, ಕವಾಯಿತು ವೀಕ್ಷಿಸುತ್ತಿದ್ದರು. ಇಂದೂ ಸರಕಾರಿ ಪ್ರಾಯೋಜಕತ್ವದಲ್ಲಿ ದಸರಾ ಕ್ರೀಡಾಕೂಟ ಹಾಗೂ ಸಂಗೀತೋತ್ಸವ ಅರಣನೆಯಲ್ಲಿ ನಡೆಯುತ್ತದೆ.

ಮೈಸೂರು ದಸರೆಗೆ ಮೆರಗು ಬಂದಿದ್ದು ಜಂಬೂಸವಾರಿಯಿಂದ. ಆಕರ್ಷಕ ಪಥಸಂಚಲನ, ಅರಮನೆಯ ಅಷ್ಟವೈಭವವನ್ನೂ ಒಮ್ಮೆಲೆ ಕಣ್ಣಾರೆ ಕಾಣುವ ಸದವಕಾಶ ದೊರಕುತ್ತಿದ್ದುದೇ ಈ ಕಾಲದಲ್ಲಿ ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರು ಈ ಉತ್ಸವಕ್ಕೆ ಬರಲು ಆರಂಭಿಸಿದರು.

ಇಂದೂ ಮೈಸೂರಿನಲ್ಲಿ ಜಂಬೂ ಸವಾರಿ ಸಾಗುತ್ತದೆ. ಮೈಸೂರು ರಾಜರು ಬಳಸುತ್ತಿದ್ದ ಸಾರೋಟುಗಳು, ಎತ್ತಿನಗಾಡಿ, ಪಲ್ಲಕ್ಕಿಗಳು, ಕುದುರೆಗಾಡಿ, ಆನೆಗಾಡಿಗಳು ಜಂಬೂಸವಾರಿಯಲ್ಲಿ ಸಾಲಾಗಿ ಸಾಗುತ್ತವೆ. ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ದಚಿತ್ರಗಳ ಮೆರವಣಿಗೆಯೂ ನಡೆಯುತ್ತದೆ.

ಈ ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ನಂದಿಧ್ವಜ, ತಾಳಮದ್ದಳೆ, ಕೀಲುಕುದುರೆ, ಹುಲಿವೇಷವೇ ಮೊದಲಾದ ಜಾನಪದ ತಂಡಗಳೂ ಪಾಲ್ಗೊಳ್ಳುತ್ತವೆ. ಸಂಜೆ ನಡೆಯುವ ಪಂಜಿನ ಮೆರವಣಿಗೆ ನಯನ ಮನೋಹರ.

ಮೈಸೂರು ನಗರದ ನರೇಂದ್ರಮಾರ್ಗಗಳಲ್ಲಿ (ರಾಜಬೀದಿ) ಸಂಚರಿಸುವ ಈ ಜಂಬೂಸವಾರಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಹಿಂದೆ ಅಂಬಾರಿಯಲ್ಲಿ ಬನ್ನಿ ಮಂಟಪಕ್ಕೆ ಬಂದ ಬಳಿಕ ಮಹಾರಾಜರು, ಆನೆಯಿಂದಿಳಿದು, ಕುದುರೆಯ ಮೇಲೆ ಕುಳಿತು ಸೈನ್ಯದ ಪರಿವೀಕ್ಷಣೆ ಮಾಡುತ್ತಿದ್ದರು. ಯುದ್ಧ ಕಾಲದಲ್ಲಿ ವೀರಾವೇಶದಿಂದ ಹೋರಾಡಿದ ಸೇನಾನಿಗಳಿಗೆ, ಶೂರ ಸೈನಿಕರಿಗೆ ಸ್ವತಃ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು.

ಇಂದು ಮಹಾರಾಜರ ವಂಶಸ್ಥರು ಅಂಬಾರಿಯಲ್ಲಿ ಕೂರುವುದಿಲ್ಲ. ಬದಲಾಗಿ ಮೈಸೂರು ಒಡೆಯರ ಕುಲದೇವತೆ ಚಾಮುಂಡೇಶ್ವರಿಯ ಪುತ್ಥಳಿಯನ್ನು ಅಂಬಾರಿಯಲ್ಲಿ ಕೂರಿಸಲಾಗುತ್ತದೆ. ಸಂಪ್ರದಾಯಬದ್ಧವಾಗಿಯೇ ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಬನ್ನಿ ಮಂಟಪದಲ್ಲಿ ಬನ್ನಿ ವಿತರಣೆಯೊಂದಿಗೆ, ಪಟಾಕಿ ಪ್ರದರ್ಶನದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲದಲ್ಲೂ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಅಂಗಡಿ, ಮುಂಗಟ್ಟುಗಳು ವಿದ್ಯುತ್ ದೀಪದಿಂದ ಝಗಮಗಿಸುತ್ತವೆ. ದಸರೆ ಕಾಲದಲ್ಲಿ ಮೈಸೂರಿನ ಸೊಬಗು ಕಾಣುವುದೇ ಒಂದು ಸೊಗಸು. ಅದೊಂದು ಇಂದ್ರನ ಅಮರಾವತಿಯಂತಿರುತ್ತದೆ.

ಮೈಸೂರು ಒಡೆಯರ ದಸರಾ ಆಚರಣೆ
ಮೈಸೂರು ಒಡೆಯರ, ವಿಜಯನಗರದರಸರ ವೈಭವದ ದಸರಾ
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ
ವಿಜಯೋತ್ಸವದ ವಿಜಯದಶಮಿಯ ವಿಚಾರಧಾರೆ

ಮುಖಪುಟ/ನಮ್ಮಹಬ್ಬಗಳು

ಮುಖಪುಟ/ನಮ್ಮಹಬ್ಬಗಳು 

ವಿಜಯೋತ್ಸವದ ವಿಜಯದಶಮಿಯ ವಿಚಾರಧಾರೆ
 ವಿಜಯದಶಮಿಯ ಬಗ್ಗೆ ಇಲ್ಲಿದೆ ಒಂದು ಸುಂದರ ಮಾಹಿತಿ ಪೂರ್ಣ ಲೇಖನ.... 

ದೈನಂದಿನ ಬದುಕಿನ ಜಂಜಡದಿಂದ ಮುಕ್ತಿ ಹೊಂದಿ ದೇಹಕ್ಕೆ, ಮನಸ್ಸಿಗೆ, ಹೊಸ ಚೇತನ ನೀಡುವುದರಲ್ಲಿ ಭಾರತೀಯ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಭೇದಗಳನ್ನು, ಸಂಬಂಧಗಳ ತೊಡಕುಗಳನ್ನು ಮತ್ತು ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಾಂಸಾರಿಕ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಹಬ್ಬಗಳು ನೆರವಾಗುತ್ತವೆ. ಬಿಗುಮಾನ ಬಿಟ್ಟು ಪರಸ್ಪರ ಬನ್ನಿ  ವಿನಿಮಯ ಮಾಡಿಕೊಂಡು ಸ್ನೇಹ , ಪ್ರೀತಿ ವ್ಯಕ್ತಪಡಿಸುವ ವಿಜಯ ದಶಮಿ ಹಬ್ಬ ಮಾನವೀಯ ಅನುಕಂಪಕ್ಕೆ ಸಹಕಾರಿ, ದಸರಾ ಎಂದ ಕೂಡಲೇ ನಮ್ಮ ಕಣ್ಮುಂದೆ ನಿಲ್ಲುವುದು ಸುಂದರವಾದ ಮೆಸೂರು ನಗರ, ಮಹಾರಾಜರ ಅರಮನೆ, ವೈಭವದಿಂದ ಜಗಜಗಿಸುವ ದೀಪಾಲಂಕಾರ, ಜಗದ್ವಿಖ್ಯಾತ ಜಂಬೂಸವಾರಿ ಮೆರವಣಿಗೆ. ಎಲ್ಲೆಲ್ಲಿ ನೋಡಿದರೂ ಕಾಣುವ ಜನಸಾಗರ ಈ ಖ್ಯಾತಿಗೆ ಮುಖ್ಯ ಕಾರಣ ಅರಮನೆಯ ಭವ್ಯತೆ, ವಾಸ್ತುಶಿಲ್ಪ, ಕುಸುರಿ ಕೆತ್ತನೆ, ಕಲಾತ್ಮಕ ವಿನ್ಯಾಸ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಕರ್ನಾಟಕ ಇತಿಹಾಸದ ಅತ್ಯಂತ ವೈಭವದ, ಸಾಮ್ರಾಜ್ಯವಾಗಿದ್ದು ವಿಜಯನಗರ ಸಾಮ್ರಾಜ್ಯ. ವಿಜಯನಗರದ ಅರಸರ ಕಾಲದಲ್ಲಿ ವಿಜಯದಶಮಿ ಉತ್ಸವ ಹೊಸ ರೂಪು ಪಡೆದುಕೊಂಡು ವಿಶ್ವವಿಖ್ಯಾತವಾಯಿತು. ಚಕ್ರವರ್ತಿ ಕೃಷ್ಣದೇವರಾಯರು ತುಂಬಾ ವೈಭವದಿಂದ ಈ ವಿಜಯ ಉತ್ಸವವನ್ನು ಆಚರಿಸಿ, ಕಲೆ, ಸಂಗೀತ, ನೃತ್ಯಗಳ ಕ್ಷೇತ್ರದಲ್ಲಿ ಸಾಧನೆ ಗಳಿಸಿದವರಿಗೆ ಪುರಸ್ಕರಿಸುವ ಪದ್ಧತಿಯನ್ನು ಆರಂಭಿಸಿದರು. ವಿಜಯ ನಗರ ಸಾಮ್ರಾಜ್ಯದ ವೈಭವದ ದಿನಗಳಲ್ಲಿ ಈ ನಾಡಿಗೆ ಪ್ರವಾಸಿಗಳಾಗಿ ಬಂದ ಎಲ್ಲಾ ವಿದೇಶಿಯರೂ, ಇಲ್ಲಿನ ವಿಜಯದಶಮಿ ಉತ್ಸವದ ವರ್ಣನೆಯನ್ನು ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ. ಅಂದಿನ ಸಂಪತ್ತು, ಸಮೃದ್ಧಿ ವೈಭವ ಜನರ ಉತ್ಸಾಹ ಸಂಭ್ರಮಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಈ ನಾಡಿನ ಗಣ್ಯರು, ಸಾಮಂತ ರಾಜರು, ವಿದೇಶಿ ಪ್ರವಾಸಿಗರು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದುದು ದಾಖಲೆಗಳಲ್ಲಿ ಕಂಡುಬರುತ್ತಿದೆ. ವಿದೇಶಿ ಪ್ರವಾಸಿಗರಾದ ೧೧ನೇ ಶತಮಾನದ ಪ್ರವಾಸಿ ಅಲ್ಬೆರೂನಿ, ೧೫ - ೧೬ ನೇ ಶತಮಾನಗಳಲ್ಲಿ ಬಂದ ಪರ್ಷಿಯಾ ದೇಶದ ಅಬ್ದುಲ್ ರಜಾಕ್, ಇಟಲಿಯ ನಿಕೋಲದ ಕೂತಿ, ಪೋರ್ಚುಗೀಸಿನ ಡೋಮಿಂಗೋ ಪಾಯಸ್ ಮುಂತಾದವರು ವಿಜಯನಗರದ ಸಾಮ್ರಾಜ್ಯದ ವಿಸ್ತಾರ, ಸಂಪತ್ತು, ವ್ಯಾಪಾರ, ವೆಭವಗಳನ್ನು ವಿಜಯದಶಮಿ ಹಬ್ಬದ ಉತ್ಸವ ಆಚರಣೆಗಳನ್ನು ಅತ್ಯಂತ ಸಮರ್ಥವಾಗಿ ದಾಖಲಿಸಿದ್ದಾರೆ. ಹಂಪೆಯಲ್ಲಿರುವ ಮಾರ್ನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಉತ್ಸವದ ಕೇಂದ್ರಗಳಾಗಿದ್ದವು. 

ವಿಜಯನಗರದ ಸಾಮ್ರಾಜ್ಯದ ಪತನಾನಂತರ ಮೈಸೂರು ಅರಸು ರಾಜ ಒಡೆಯರು ಕ್ರಿ.ಶ. ೧೬೧೦ ರಿಂದ ಈ ಪರಂಪರೆಯನ್ನು ಮೈಸೂರಿನಲ್ಲಿ ಮುಂದುವರೆಸಿ ಜಗದ್ವಿಖ್ಯಾತವಾದ ದಸರಾ ಅಚರಣೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬಂದರು. ಮೈಸೂರು ದೊರೆಗಳ ಕಾಲದಲ್ಲಿ, ಈ ದಸರಾ ಹಬ್ಬವು ವಿಶೇಷ ಮೆರಗು ಪಡೆದು ವಿಶ್ವ ಪ್ರಸಿದ್ದಿ ಪಡೆಯಿತು. ಎಲ್ಲಾ ದೇವಾಲಯಗಳಲ್ಲಿ ಪೂಜೆಗಳೂ, ಪಟ್ಟದ ಆನೆ, ಪಟ್ಟದ ಕುದುರೆ, ನಂದಿಗೆ ವಿದ್ಯುಕ್ತ ಪೂಜೆಗಳೂ, ವಿದ್ವಾಂಸರಿಂದ ಸಂಗೀತ ಕಛೇರಿಗಳೂ, ಬೊಂಬೆಗಳ ಪ್ರದರ್ಶನಗಳೂ ನಡೆಯುತ್ತಿದ್ದವು. ಒಂಭತ್ತು ದಿನಗಳೂ ವಿಶೇಷ ದರ್ಬಾರು ನಡೆದು, ಮಹಾರಾಜರು ಚಿನ್ನದ ಸಿಂಹಾಸನಾರೋಹಣ ಮಾಡುತ್ತಿದ್ದರು. ಅಕಾರಿಗಳೂ, ಸಾಮಂತರೂ ಕಪ್ಪಕಾಣಿಕೆ ನೀಡುತ್ತಿದ್ದರು, ಆಡಳಿತದ ಸಹಾಯಕರಿಗೆ, ಗಣ್ಯರಿಗೆ, ಶೂರರಿಗೆ, ವಿಶೇಷ ಮನ್ನಣೆ ಹತ್ತನೇ ದಿನ ಜಗದ್ವಿಖ್ಯಾತವಾದ ಆನೆಯ ಮೇಲೆ ಜಂಬೂಸವಾರಿ ಮೆರವಣಿಗೆ ಎರಡು, ಮೂರು ಮೈಲುದ್ದ ವೈಭವದಿಂದ ನಡೆಯುತ್ತಿತ್ತು. ಆನೆ, ಒಂಟೆ ವಿವಿಧ ರಥಗಳು, ವಾಹನಗಳಲ್ಲಿ ರಾಜ ಪರಿವಾರದವರೂ, ಅಕಾರಿಗಳೂ, ವಾದ್ಯ ಘೋಷಗಳೊಡನೆ ಸಾಗುತ್ತಿದ್ದರು.

ಬಂಗಾರದ ಅಂಬಾರಿಯಲ್ಲಿ ಮಹಾರಾಜರ ದರ್ಶನ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿತ್ತು. ಧನ್ಯತೆಯ ಭಾವದಿಂದ ವೀಕ್ಷಕರು ಕೈ ಮುಗಿಯುತ್ತಿದ್ದ ದೃಶ್ಯ ಈ ಲೇಖಕನಿಗೆ ಇಂದಿಗೂ ನೆನಪಿನಲ್ಲಿ ಹಸಿರಾಗಿದೆ. ಬನ್ನಿ ಪೂಜೆ ನಂತರ ಅಂಬಾರಿ ಮೆರವಣಿಗೆ ಅರಮನೆಗೆ ಹಿಂದಿರುಗುವಾಗ ವಿದ್ಯುತ್ ದೀಪಗಳ ಅಲಂಕಾರದ ಹಿನ್ನಲೆಯಲ್ಲಿ ಮೈಸೂರು ನಗರ ಕಿನ್ನರ ಲೋಕವನ್ನು ನೆನಪಿಸುವಂತೆ ಕಂಗೊಳಿಸುತ್ತಿತ್ತು. ಸೈನಿಕರ ಕವಾಯತು. ಕಾಲಾಳುಗಳ ಪಥ ಸಂಚಲನ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಚಾಮುಂಡಿ ಬೆಟ್ಟದ ಮೇಲೂ ಪೂಜೆ, ಉತ್ಸವ, ತೆಪ್ಪೋತ್ಸವ ನಡೆಯುತ್ತಿದ್ದವು. ಬಾಣ ಬಿರುಸು ಪ್ರದರ್ಶನ ನಡೆದು ಇಡೀ ಮೈಸೂರು ದೀಪಾಲಂಕಾರದಿಂದ ಕಂಗೊಳಿಸುತ್ತಾ ನಾಡಿನ ಎಲ್ಲ ಭಾಗಗಳಿಂದ ಪ್ರವಾಸಿಗರನ್ನೂ, ವಿದೇಶಿಯರನ್ನೂ ಆರ್ಕಸುತ್ತಾ ಬಂದಿದೆ.

ದಸರೆ ಎಂದೊಡನೆ ನಮಗೆ ನೆನಪಾಗುವುದು ಮೈಸೂರಿನ ರಾಜ ಮನೆತನದ ದರ್ಬಾರಿನ ವೈಭವ, ವಿದ್ಯುತ್ ದೀಪಗಳಿಂದ ಜಗಜಗಿಸುವ ಇಂಡೋ ಸರಸೈನಿಕ್ ವಾಸ್ತು ಶೈಲಿಯ ಬೃಹತ್ ಅರಮನೆ. ಹಳೆಯ ಕಟ್ಟಿಗೆ ಅರಮನೆ ಆಕಸ್ಮಿಕವಾಗಿ ೧೮೯೭ ರಲ್ಲಿ ಬೆಂಕಿಗೆ ಆಹುತಿಯಾದ ನಂತರ ಈಗಿರುವ ಬೂದು ಬಣ್ಣದ ಗ್ರಾನೆಟ್‌ಶಿಲೆಯ ಭವ್ಯವಾದ ಅರಮನೆ ನಿರ್ಮಾಣವಾಯಿತು. ಚಿನ್ನದ ಮುಲಾಮಿನ ಸುಂದರ ಶಿಖರ, ಚಿನ್ನದ ಬಾವುಟ ಹೊಂದಿರುವ ೧೪೫ ಅಡಿ ಎತ್ತರದ ಶಿಖರವಿದೆ. ಇಲ್ಲಿರುವ ಸಿಂಹಾಸನ ಪಾಂಡವರ ಕಾಲದ್ದೆಂದೂ, ನಂತರದ ಕಾಲಗಟ್ಟದಲ್ಲಿ ವಿಜಯನಗರ ಅರಸು ಶ್ರೀ ರಂಗರಾಯರು ಕ್ರಿ. ಶ. ೧೬೧೦ ರಲ್ಲಿ ಮೈಸೂರಿನ ರಾಜ ಒಡೆಯರಿಗೆ ಕೊಟ್ಟದ್ದೆಂದೂ ಉಲ್ಲೇಖವಿದೆ. ಪ್ರಭುದ್ಧರಾಗುತ್ತಿದ್ದ ಮೈಸೂರು ಅರಸರು ಪರಂಪರೆ ಮುಂದುವರೆಸಿದರೆಂದೂ ಚರಿತ್ರೆಯಲ್ಲಿ ಕಂಡು ಬರುತ್ತಿದೆ. ಸ್ವಾತಂತ್ರ್ಯಾ ನಂತರ ಕ್ರಮೇಣ ರಾಜ ಪರಿವಾರದ ಉತ್ಸವವಾಗಿ ಕೆಲ ಕಾಲ ನಡೆದು ಬಂದಿತು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಾಜರಾಜೇಶ್ವರಿಯ ನಾಡಹಬ್ಬವಾಗಿ ಸರ್ಕಾರ ನಡೆಸಿಕೊಂಡು ಬರುತ್ತಿದೆ. ಎಲ್ಲಾ ಸರ್ಕಾರಿ ಉತ್ಸವಗಳಂತೆ ಈ ಉತ್ಸವವು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿರುವುದು ಒಂದು ವಿಪರ್ಯಾಸ.

ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ನವರಾತ್ರಿ ಹಬ್ಬ ಅತೀ ವಿಶಿಷ್ಟವಾದದ್ದು. ವಿಜಯದಶಮಿ ಆಚರಣೆಗೆ ತನ್ನದೇ ಆದ ಪೌರಾಣಿಕ ಹಿನ್ನಲೆಯೂ ಇದೆ. ಪಾಂಡವರು ತಮ್ಮ ಅಜ್ಞಾತವಾಸದ ಕಾಲದಲ್ಲಿ, ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಇರಿಸಿದ್ದು ನಂತರದಲ್ಲಿ ಬನ್ನಿ ಮರವನ್ನು ಪೂಜಿಸಿ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದು, ಕೌರವರನ್ನು ಸೋಲಿಸಿ, ವಿಜಯ ಸಾಸಿದ ದಿನದಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ವಿಜಯದ ಸಂಕೇತದ ಮುಂದುವರಿಕೆಯಾಗಿ ಇಂದಿಗೂ ವಿಜಯ ದಶಮಿಯ ದಿನ ಬನ್ನಿ ಮುಡಿಯುವ ಹಬ್ಬ ಹರ್ಷ ಉಲ್ಲಾಸಗಳಿಂದ ನಡೆಯುತ್ತಾ ಬಂದಿದೆ. ಬನ್ನಿ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇಂದಿಗೂ ಉಳಿದು ಬಂದಿರುವುದನ್ನು ಕಾಣಬಹುದು. ಗ್ರಾಮಾಂತರ ಪ್ರದೇಶಗಳಲ್ಲಿಯೂ ಉತ್ಸಾಹ, ಸಂಭ್ರಮಗಳಿಂದ ಬನ್ನಿ ಮಂಟಪಗಳಲ್ಲಿ ಹಸಿರು ತೋರಣ ಕಟ್ಟಿ, ಆಯುಧಗಳ ಪೂಜೆ ಮಾಡಿ ಮೆರವಣಿಗೆಯಲ್ಲಿ ಗ್ರಾಮ ದೇವರ ಉತ್ಸವದೊಂದಿಗೆ ಬನ್ನಿ ಪೂಜೆ, ಬನ್ನಿ ವಿನಿಮಯ ಕಾರ್ಯಕ್ರಮಗಳೂ, ಗ್ರಾಮೀಣ ಆಟಗಳೂ ನಡೆಯುತ್ತವೆ.

ಭಾರತದ ಬೇರೆಬೇರೆ ಗ್ರಾಮಗಳಲ್ಲಿಯೂ ಈ ದಸರಾ ಹಬ್ಬವನ್ನು ನವರಾತ್ರಿ, ದುರ್ಗಾಪೂಜೆ, ರಾಮಲೀಲೆ, ಕಾಳಿಕಾದೇವಿ ಪೂಜೆ ಎಂದು ೧೦ ದಿನಗಳ ಕಾ ಆಚರಿಸಲಾಗುತ್ತಿದೆ. ಈ ಎಲ್ಲಾ ಉತ್ಸವಗಳೂ ಒಂದೇ ಅವಯಲ್ಲಿ ನಡೆಯುವ ಶಕ್ತಿ ಪೂಜೆಗಳೇ ಆಗಿವೆ. ಚಾಮುಂಡಿ, ಕಾಳಿ, ದುರ್ಗಾ, ಮಹಿಷಾಸುರ ಮರ್ದಿನಿ, ಮುಂತಾದ ದೇವತೆಗಳಿಂದ ದುಷ್ಟ ಸಂಹಾರವೇ ಎಲ್ಲಾ ಪೂಜೆಗಳ ಆಚರಣೆಗಳ ಆಶಯವಾಗಿದೆ. ದುಃಖ, ದಾರಿದ್ರ್ಯಗಳ ನಿವಾರಣೆ, ಸಿರಿ ಸಂಪತ್ತುಗಳ ಸಮೃದ್ಧಿಗಾಗಿ ಬುದ್ಧಿ ವಿವೇಕಗಳ ವರ್ಧನೆಗಾಗಿ ೮ ನೇ ದಿನ ಸರಸ್ವತಿ ಪೂಜೆ, ೯ ನೇ ದಿನ ಆಯುಧಗಳ ಪೂಜೆ, ೧೦ ನೇ ದಿನ ಶಕ್ತಿ, ಲಕ್ಷ್ಮಿಯರ ಪೂಜೆಗಳು ನಡೆಯುತ್ತವೆ. ವಿಜಯದಶಮಿಯಂದು ಶುಭ ಕಾರ್ಯಗಳ ಪ್ರಾರಂಭ, ಹೊಸ ಉದ್ಯಮ, ಉದ್ಯೋಗಗಳ ಮಹೂರ್ತ, ಮುಂತಾಗಿ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ರಾವಣ, ಕುಂಭಕರ್ಣಾದಿಗಳ ಬೃಹತ್ ಗಾತ್ರದ ಬೊಂಬೆಗಳನ್ನೂ ಸಿಡಿಮದ್ದುಗಳಿಂದ ಅಗ್ನಿಗೆ ಆಹುತಿ ಮಾಡಿ ರಾಮಲೀಲಾ ಉತ್ಸವವನ್ನು ಸಡಗರದಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಗಾತ್ರದ ಸುಂದರವಾದ ಕಾಳಿಕಾ ದೇವಿಯ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಿ, ಬಣ್ಣದಿಂದ ಸಿಂಗರಿಸಿ ಅತ್ಯಂತ ಆಕರ್ಷಕವಾದ ಮಂಟಪಗಳಲ್ಲಿ ಸ್ಥಾಪಿಸಿ, ೯ ದಿನಗಳ ಪೂಜೆಮಾಡಿ ನಂತರ ಆಕರ್ಷಕ ಮೆರವಣಿಗೆ ಮೂಲಕ ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡುತ್ತಾರೆ.

ವಿಜಯನಗರದ ಪತನಾನಂತರ ಅಸ್ತಿತ್ವಕ್ಕೆ ಬಂದ, ಕೆಳದಿ ಸಾಮ್ರಾಜ್ಯದ ಎಲ್ಲಾ ಅರಸರೂ, ದಸರೆ, ವಿಜಯದಶಮಿ ಉತ್ಸವಗಳನ್ನು ಅತ್ಯಂತ ವೆಭವದಿಂದ ತಮ್ಮ ರಾಜ್ಯದಲ್ಲಿ ಮುಂದುವರೆಸಿಕೊಂಡು ಬಂದ ಸಂಗತಿಗಳು ಕೆಳದಿ ನೃಪವಿಜಯ ಗ್ರಂಥದಲ್ಲಿ ಉಲ್ಲೇಖವಾಗಿದೆ. ಅಲ್ಲದೇ ೧೬ ನೇ ಶತಮಾನದಲ್ಲಿ ಬಂದ ಇಟಾಲಿಯ ಪ್ರವಾಸಿ ಏಯತ್ರೋ-ಡೆಲ್ಲಾ-ವಿಲ್ಲೆ ತನ್ನ ಪ್ರವಾಸಿ ಕಥನದಲ್ಲಿ ವಿವರವಾಗಿ ಉಲ್ಲೇಖಿಸಿದ್ದಾನೆ.

ಮೈಸೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ಬಹುತೇಕ ಊರುಗಳಲ್ಲಿ ಮುಖ್ಯವಾಗಿ ಕೊಡಗಿನ ಮಡಿಕೇರಿಯಲ್ಲಿ , ಚಿತ್ರದುರ್ಗ, ಶೃಂಗೇರಿಗಳಲ್ಲಿ ಮತ್ತು ಶಿವಮೊಗ್ಗ ನಗರದಲ್ಲಿ ವಿಜಯದಶಮಿ ಉತ್ಸವವನ್ನು ವೆಭವದಿಂದ ಆಚರಿಸಲಾಗುತ್ತದೆ. ಮಡಿಕೇರಿಯಲ್ಲಿ ಕೊಡಗಿನ ಅರಸರು ನಡೆಸುತಿದ್ದ ದಸರಾ ಸಮಾರಂಭವು ಸ್ವಾತಂತ್ರ್ಯಾ ನಂತರ, ಜನತೆಯ ಹಬ್ಬವಾಗಿ ರೂಪುಗೊಂಡು, ರಾತ್ರಿ ೯ ರಿಂದ ಪ್ರಾರಂಭವಾಗುವ ವಿವಿಧ ದೇವತೆಗಳ ಉತ್ಸವವು ಬೆಳಕಿನ ಉತ್ಸವವಾಗಿ ಬೆಳಿಗ್ಗೆಯವರೆಗೂ ಹರ್ಷ ಉಲ್ಲಾಸಗಳಿಂದ ನಡೆಯುತ್ತಿದೆ. ಹತ್ತಾರು ವರ್ಷಗಳಿಂದ ಕೊಡಗಿನ ವಿರಾಜಪೇಟೆ, ಕುಶಾಲನಗರಗಳಲ್ಲೂ ಇಂಥ ವಿಜಯದಶಮಿ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕರು ಪ್ರಾರಂಭಿಸಿದ ದಸರಾ ಸಮಾರಂಭವನ್ನು ನಂತರದ ಕಾಲಘಟ್ಟದಲ್ಲಿ ಅಲ್ಲಿನ ರಾಜಗುರುಗಳಾಗಿದ್ದ ಶ್ರೀ ಮುರುಘರಾಜೇಂದ್ರ ಮಠದ ಜಗದ್ಗುರುಗಳವರು, ನವರಾತ್ರಿ ಸಂದರ್ಭದಲ್ಲಿ ಆಯುಧ ಪೂಜೆ, ಸಿಂಹಾಸನಾರೋಹಣ ಮಾಡುತ್ತಾರೆ. ಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಮಠದಿಂದ ಚಿತ್ರದುರ್ಗ ಕೋಟೆಯ ಮೇಲೆ ಇರುವ ಸಂಪಿಗೆ ಸಿದ್ಧೇಶ್ವರ ದೇವಾಲಯ ಹತ್ತಿರದ ನಾಯಕರು ನಿರ್ಮಿಸಿಕೊಟ್ಟಿರುವ ಶ್ರೀ ಮುರುಘಾಮಠದ ಆವರಣದಲ್ಲಿ ಬನ್ನಿ ಪೂಜೆ ಮಾಡಿ ವಿಜಯದಶಮಿಯನ್ನು ಆಚರಿಸುವ ಪದ್ಧತಿಯು ಮುಂದುವರಿದು ಬಂದಿದೆ. ಉತ್ತರ ಕರ್ನಾಟಕದಲ್ಲಿ ಮೆಲಾರಲಿಂಗ ದೇವರ ಹಬ್ಬವಾಗಿ ವಿಶಿಷ್ಠ ರೀತಿಯಲ್ಲಿ ವಿಜಯದಶಮಿ ಅಚರಣೆ ನಡೆದು ಬಂದಿದೆ.

ಶಿವಮೊಗ್ಗ ದಸರೆ: ಈಗ ಸುಮಾರು ೨೫ - ೩೦ ವರ್ಷಗಳಿಂದಲೂ ಶಿವಮೊಗ್ಗ ನಗರದ ನೆಹರೂ ಮೆದಾನದಲ್ಲಿ ದಸರಾ ಉತ್ಸವ ವೆಭವದಿಂದ ನಡೆಯುತ್ತಿದೆ. ನಗರ ಸಭೆಯ ಸಹಕಾರದಿಂದ ನಗರದ ಮತ್ತು ಹತ್ತಿರದ ಗ್ರಾಮ ದೇವತೆಗಳ ಮೆರವಣಿಗೆ ಐತಿಹಾಸಿಕ ಶಿವಪ್ಪನಾಯಕ ಅರಮನೆಯಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಉತ್ಸಾಹದಿಂದ ಧಾರ್ಮಿಕ ವಿ ವಿಧಾನಗಳಿಂದ ನಡೆಯುತ್ತಿದೆ. ಸಂಜೆ ೬ ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಸುಮಾರು ೩೦ ಸಾವಿರ ಜನ ಸೇರಿರುತ್ತಾರೆ. ಸರ್ಕಾರದ ಪ್ರತಿನಿಯಾಗಿ ಶಿವಮೊಗ್ಗ ತಾಲ್ಲೂಕು ತಹಸೀಲ್ದಾರರು ಬನ್ನಿ ಪೂಜೆ ಮಾಡಿ ಸಾಂಕೇತಿಕವಾಗಿ ಕತ್ತಿಯಿಂದ ಬಾಳೆಗಿಡವನ್ನು ಕಡಿದು ವಿಜಯದಶಮಿಯನ್ನು ಆಚರಿಸುತ್ತಾರೆ. ನಂತರ ಜಾತಿ, ವರ್ಗ, ಬೇಧವಿಲ್ಲದೇ, ನೆರೆದ ಎಲ್ಲ ಧರ್ಮೀಯರೂ ಆತ್ಮೀಯತೆಯಿಂದ ಬನ್ನಿ ಪತ್ರೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಪರಸ್ಪರ ಪ್ರೀತಿ, ಗೌರವ ಅರ್ಪಿಸುತ್ತಾರೆ. ದಸರೆ ಭಾವೆಕ್ಯತೆಯ ಸಮಾವೇಶವಾಗಿ ರೂಪುಗೊಳ್ಳುತ್ತಿರುವುದು ಇಂದಿನ ದಿನಮಾನಗಳಲ್ಲಿ ಅಭಿಮಾನದ ಸಂಗತಿಯಾಗಿದೆ.

ಇತ್ತೀಚೆಗೆ ಬದಲಾದ ಸನ್ನಿವೇಶಗಳಲ್ಲಿ ದಸರಾ ನಾಡಹಬ್ಬವಾಗಬೇಕು, ಜನಸಾಮಾನ್ಯರ ಹಬ್ಬವಾಗಬೇಕು ಎಂಬ ದನಿ ಕೇಳಿ ಬರುತ್ತಿದೆ. ಆದರೆ ಅಂತರ್ಯದಲ್ಲಿ ಮೈಸೂರು ಅರಮನೆಯಲ್ಲಿ ನಡೆದು ಬರುತ್ತಿದ್ದ ಆಚರಣೆಗಳು ಮತ್ತು ಸಂಪ್ರದಾಯಗಳು ನಾಟಕ ರೂಪದಲ್ಲಿ ನಮ್ಮ ಕಣ್ಮುಂದೆ ಅಭಿವ್ಯಕ್ತಿಗೊಳ್ಳುತ್ತವೆ. ಆದರೆ ದಸರಾ ಎಂದರೆ ಅಕಾರಾರೂಢ ರಾಜಕಾರಿಣಿಗಳ, ಅಕಾರಿಗಳ, ಪೋಲೀಸರ ದಸರಾ ಆಗುತ್ತಿರುವುದು ಒಂದು ವಿಪರ್ಯಾಸ. ಜಾತಿ ಭೇದವಿಲ್ಲದೆ ನಾಡಿನಾದ್ಯಂತ ಎಲ್ಲ ವರ್ಗದ ಎಲ್ಲ ಸಮೂದಾಯದವರೂ ಪಾಲ್ಗೊಂಡು ಆಚರಿಸುವ ಈ ಹಬ್ಬವನ್ನು ಹಬ್ಬಗಳ ರಾಜ ಎನ್ನುತ್ತಾರೆ. ಅಬಾಲವೃದ್ಧರೂ ಶುಚಿರ್ಭೂತರಾಗಿ ಹೊಸ ಬಟ್ಟೆ ಉಟ್ಟು ಪರಸ್ಪರ ಬನ್ನಿ ಮುಡಿದು, ಶುಭಾಶಯ ವಿನಿಮಯ ಮಾಡಿಕೊಂಡು, ಪ್ರೀತಿ ವಿಶ್ವಾಸದಿಂದ ಗೌರವ ವ್ಯಕ್ತ ಪಡಿಸುವ ವಿಶಿಷ್ಟ ಹಬ್ಬ ವಿಜಯದಶಮಿ.

ಕಾಪಿರೈಟ್ ೨೦೦೩, ಜಯದೇವಪ್ಪ ಜೈನಕೇರಿ,
ಗೌ||ಕಾರ್ಯದರ್ಶಿ, ಕರ್ನಾಟಕ ಸಂಘ, ಶಿವಮೊಗ್ಗ;
ವಿಳಾಸ: ೮೭, ಶಾಂತಲಾ, ಕುವೆಂಪು ರಸ್ತೆ,
ಶಿವಮೊಗ್ಗ - ೫೭೭ ೨೦೧,
ದೂರವಾಣಿ : ೦೮೧೮೨-೨೭೧೯೬೫

ಮೈಸೂರು ಒಡೆಯರ ದಸರಾ ಆಚರಣೆ
ಮೈಸೂರು ಒಡೆಯರ, ವಿಜಯನಗರದರಸರ ವೈಭವದ ದಸರಾ
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ
ವಿಜಯೋತ್ಸವದ ವಿಜಯದಶಮಿಯ ವಿಚಾರಧಾರೆ

ಮುಖಪುಟ/ನಮ್ಮಹಬ್ಬಗಳು

Leave a Comment

(0 Comments)

Your email address will not be published. Required fields are marked *